ಕೋಳಿ

ಏವಿಸ್, ವರ್ಗ, ಗ್ಯಾಲಿಫಾರ್ಮೀಸ್ ಗಣ, ಫೇಸಿಯಾನಿಡೀ ಕುಟುಂಬಕ್ಕೆ ಸೇರಿದ ಹಕ್ಕಿ. ಮಾನವ ಸಾಕಿರುವ ವಿವಿಧ ಬಗೆಯ ಕೋಳಿಗಳೆಲ್ಲ ಗ್ಯಾಲಸ್ ಎಂಬ ಶಾಸ್ತ್ರೀಯ ಹೆಸರಿನ ಕಾಡುಕೋಳಿಯಿಂದ ಪಡೆದವಾಗಿವೆ. ಕೋಳಿ ನೆಲದ ಮೇಲೆ ಮಾತ್ರ ವಾಸಿಸಬಲ್ಲುದು. ಹಾರುವ ಸಾಮಥ್ರ್ಯ ಹೆಚ್ಚಾಗಿಲ್ಲ. ರೆಕ್ಕೆಗಳನ್ನು ವೇಗವಾಗಿ ಬಡಿಯುತ್ತ ಒಂದು ರೀತಿಯಲ್ಲಿ ಕುಪ್ಪಳಿಸುತ್ತ ಸಾಗಬಲ್ಲುದು. ಬೇರೆ ಹಕ್ಕಿಗಳಿಗೆ ಹೋಲಿಸಿದರೆ ಇದರ ದೇಹರಚನೆ ಮತ್ತು ಗುಣಗಳು ಬಹಳ ಹಿಂದುಳಿದ ರೀತಿಯವು. ಮೂಗಿನ ಹೊಳ್ಳೆಯ ಮೇಲೆ ಪುಕ್ಕಗಳಿಲ್ಲದಿರುವುದು. 

ನಸುಬಾಗಿದ ಚಿಕ್ಕ ಮತ್ತು ದೃಢವಾದ ಕೊಕ್ಕು, 4 ಬೆರಳುಗಳುಳ್ಳ ಪಾದಗಳು (ಇವುಗಳಲ್ಲಿ 3 ಬೆರಳುಗಳು ಮುಂಭಾಗದೆಡೆಗೂ ಒಂದು ಹಿಂದಕ್ಕೂ ಚಾಚಿವೆ). ಪಾದಗಳ ಮೇಲೆ ಪುಕ್ಕಗಳಿಲ್ಲದಿರುವುದು, ಕತ್ತಿನೊಳಗೆ ಗಾಳಿಚೀಲಗಳಿಲ್ಲದಿರುವುದು ಚಿಕ್ಕ ರೆಕ್ಕೆಗಳು-ಇವು ಕೋಳಿಯ ಮುಖ್ಯ ಲಕ್ಷಣಗಳು. ಕಾಳುಗಳೇ ಇದರ ಪ್ರಧಾನ ಆಹಾರ. ಕಾಡುಕೋಳಿ ಒಂದು ಸಲಕ್ಕೆ 8-12 ಮೊಟ್ಟೆಯಿಡುವುದಾದರೂ ಸಾಕಿದ ಕೋಳೀಗಳಲ್ಲಿ ನಾಡುಕೋಳಿಗಳು ದಿನಕ್ಕೊಂದರಂತೆ ಸುಮಾರು 20 ದಿನ ಇಡುತ್ತವೆ. ಅನಂತರ ಸುಮಾರು 3-4 ತಿಂಗಳು ಕಳೆದ ಮೇಲೆ ಮತ್ತೆ ಮೊಟ್ಟೆಯಿಡಲು ಆರಂಭಿಸುತ್ತವೆ. ಫಾರಮ್ ಕೋಳಿಗಳು ದಿನಕ್ಕೆ ಒಂದು ಮೊಟ್ಟೆಯಂತೆ ವರ್ಷಕ್ಕೆ ಸುಮಾರು 240-250 ದಿನಗಳ ಕಾಲ ಮೊಟ್ಟೆಯಿಡುತ್ತವೆ.

	ಕೋಳಿಗಳನ್ನು ಬಹು ಹಿಂದಿನಿಂದಲೂ ಮಾಂಸಕ್ಕಾಗಿ ಮತ್ತು ಮೊಟ್ಟೆಗಾಗಿ ಮಾನವ ಸಾಕುತ್ತಿದ್ದಾನೆ. ಅವನು ಸಾಕಿರುವ ಪಕ್ಷಿಗಳಲ್ಲೆಲ್ಲ ಕೋಳಿಯೇ ಬಹು ಪ್ರಮುಖವಾದುದು. ನೂರಾರು ವರ್ಷಗಳಿಂದ ಹಲವಾರು ಬಗೆಯ ಕೋಳಿಗಳನ್ನು ಅಡ್ಡತಳಿಯೆಬ್ಬಿಕೆಗಳಿಂದ ಪಡೆಯಲಾಗಿದ್ದು ಎಲ್ಲ ಬಗೆಗಳೂ ಕಾಡುಕೋಳಿಯಿಂದ ಭಿನ್ನವಾಗಿವೆ. ಇವುಗಳ ಸಾಕಣೆಯೂ ಒಂದು ಪ್ರಮುಖ ಉದ್ಯಮವಾಗಿ ಬೆಳೆದಿದೆ. ಕೋಳಿ ಸಾಕಣೆ ಯಾವಾಗ ಆರಂಭವಾಯಿತೆಂದು ಹೇಳುವುದು ಕಷ್ಟ. ಕ್ರಿ.ಪೂ 3,200ಕ್ಕೂ ಹಿಂದೆ ಭಾರತದಲ್ಲಿ ಕೋಳಿ ಸಾಕಣೆ ಆರಂಭವಾಯಿತೆಂದು ಅಭಿಪ್ರಾಯಪಡಲಾಗಿದೆ.		 (ನೋಡಿ- ಕೋಳಿಸಾಕಣೆ)								 					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ